Popup Image

Share this powerful gallery of art and climate.

These paintings speak of survival, resistance, and care. Share this page with those who value community, creativity, and climate justice.

Back

Commons

Karnataka

ಒಣ ಬಾವಿಗಳಿಂದ ಜಿಲ್ಲಾ ನಿರ್ಣಯಗಳವರೆಗೆ – ಹವಾಮಾನ ಬದಲಾವಣೆ ವಿರುದ್ಧ ಕೋಲಾರದಲ್ಲಿ ತಳಮಟ್ಟದ ಸಂಘಟಿತ ಹೋರಾಟ

Mythreyee Ramesh

10 April 2026

ಕರ್ನಾಟಕದ ಕೋಲಾರ ಜಿಲ್ಲೆಯ ಜನರು ವರ್ಷದಿಂದ ವರ್ಷಕ್ಕೆ ತಮ್ಮ ಬಾವಿಗಳಲ್ಲಿ ನೀರು ಕೆಳಕ್ಕೆ ಹೋಗುವುದನ್ನು ಅಸಹಾಯಕರಾಗಿ ನೋಡುತ್ತಾ ಬಂದಿದ್ದಾರೆ. ಬೆಂಗಳೂರಿನೊಂದಿಗೆ ಗಡಿ ಹಂಚಿಕೊಂಡ ಈ ಜಿಲ್ಲೆಯಲ್ಲಿ ೩೦೦೦ ಕೆರೆಗಳಿದ್ದರೂ ಸಂಪೂರ್ಣವಾಗಿ ಮಳೆಯಾಶ್ರಿತವಾಗಿಯೇ ಇಲ್ಲಿನ ಕೃಷಿ ಚಟುವಟಿಕೆ ಹಾಗೂ ಜನರ ಬದುಕು ನಡೆಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಇಲ್ಲಿನ ಅಂತರ್ಜಲ ಮಟ್ಟ ೧೬೦೦ ಅಡಿಯಿಂದ ೨೦೦೦ ಅಡಿಗೆ ಕುಸಿದಿದೆ. ಅತಿಯಾದ ರಾಸಾಯನಿಕ ಕೃಷಿ, ಪದೇಪದೇ ಬರಗಾಲ, ೧೯೮೦ರ ದಶಕದಲ್ಲಿ ಶೇ.೩೩ರಷ್ಟಿದ್ದ ಅರಣ್ಯ ಪ್ರದೇಶ ಈಗ ಶೇ.೬ಕ್ಕೆ ಇಳಿದಿರುವುದು ಹಾಗೂ ಮಣ್ಣಿನ ಆರೋಗ್ಯ ಕ್ಷೀಣಿಸಿದ ಕಾರಣ ಇಲ್ಲಿನ ಭೂರಚನೆ ಹಾಗೂ ಜನಜೀವನವೆರಡೂ ರೂಪಾಂತರಗೊಂಡಿವೆ.

ಪರಿಹಾರಕ್ಕಾಗಿ ಸ್ಥಳೀಯ ಮುಖಂಡರು ಗ್ರಾಮ ಪಂಚಾಯ್ತಿಗಳತ್ತ ಮುಖ ಮಾಡಿದ್ದರು.

ಅದರಂತೆ ಕೋಲಾರದ ಆರು ತಾಲೂಕುಗಳ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಪ್ರತಿನಿಧಿಗಳು ಒಂದಾಗಿ ಇದಕ್ಕೆ ಉತ್ತರ ಕಂಡುಕೊಳ್ಳಲು ಮುಂದಾದರು. ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಎಲ್ಲರ ಮೇಲೂ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿರುವಾಗ ಕೋಲಾರ ಜಿಲ್ಲೆಯ ಗ್ರಾಮೀಣ ಸರ್ಕಾರಗಳು ಹೇಗೆ ಕೃಷಿ, ಅಂತರ್ಜಲ, ಆರೋಗ್ಯ ಹಾಗೂ ಜನಜೀವನದ ಮೇಲೆ ಅದರ ದುಷ್ಪರಿಣಾಮಗಳು ಕಡಿಮೆಯಾಗುವಂತೆ ನೋಡಿಕೊಳ್ಳಲು ಸಾಧ್ಯ ಎಂಬ ಬಗ್ಗೆ ಚಿಂತನ-ಮಂಥನ ನಡೆಸಿದರು.

Illustration by: Eisha Nair

ನಂತರ ಸಮಸ್ಯೆಯನ್ನು ದಾಖಲಿಸಲು ಹಾಗೂ ಪರಿಹಾರಗಳನ್ನು ಗುರುತಿಸಲು ಗ್ರಾಮವಿಕಾಸ್ ಮತ್ತು ಅಸರ್ ಬೆಂಬಲದಿಂದ ತಾಲೂಕು ಮಟ್ಟದಲ್ಲಿ ಪಂಚಾಯತ್ ಸಮ್ಮೇಳನಗಳನ್ನು ನಡೆಸಲಾಯಿತು. ಅದರಲ್ಲಿ ಪಾಲ್ಗೊಂಡವರು ಸಮೂಹ ಚರ್ಚೆಗಳ ಮೂಲಕ ತಮ್ಮ ತಮ್ಮ ಹಳ್ಳಿಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅವುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳು, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಮಧ್ಯಪ್ರವೇಶದ ಅಗತ್ಯವಿರುವ ಸಮಸ್ಯೆಗಳು ಹಾಗೂ ಇಲಾಖೆಗಳಿಂದ ಪರಿಹರಿಸಬೇಕಾದ ಸಮಸ್ಯೆಗಳನ್ನು ವಿಂಗಡಿಸಿಕೊಂಡರು.

ಸಮ್ಮೇಳನದಲ್ಲಿ ನಡೆದ ಚರ್ಚೆಗಳು ಸ್ಥಳೀಯ ಮಟ್ಟದಲ್ಲಿ ಜನರು ಎದುರಿಸುತ್ತಿರುವ ನೈಜ ಸವಾಲುಗಳಿಗೆ ನೇರವಾಗಿ ಸಂಬಂಧಿಸಿದ್ದಾಗಿದ್ದವು. ಕುಸಿಯುತ್ತಿರುವ ಅಂತರ್ಜಲ ಮಟ್ಟ, ಮಣ್ಣಿನ ಸವಕಳಿ, ಜೀವ ವೈವಿಧ್ಯದ ನಷ್ಟ ಹಾಗೂ ಗ್ರಾಮೀಣ ಜನಜೀವನದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಆದರೆ, ಅಲ್ಲಿ ಮಾಡಿದ ಶಿಫಾರಸುಗಳು ಕೇವಲ ಗ್ರಾಮೀಣ ಮಟ್ಟದ ಕ್ರಿಯಾಯೋಜನೆಗಷ್ಟೇ ಸೀಮಿತವಾಗಿರಲಿಲ್ಲ. ದೀರ್ಘಾವಧಿಯಲ್ಲಿ ಕೋಲಾರದ ಜೀವಿಪರಿಸರವನ್ನು ರಕ್ಷಿಸಲು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ನೀತಿ-ನಿಯಮಗಳ ಬದಲಾವಣೆಯ ಕುರಿತೂ ಸಮಾವೇಶದಲ್ಲಿ ಶಿಫಾರಸುಗಳನ್ನು ಮಾಡಲಾಯಿತು.

ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಸ್ಥಳೀಯ ಜನರ ಧ್ವನಿಗೆ ಬಲ ತುಂಬಲು ಜಿಲ್ಲಾ ಮಟ್ಟದ ಮಾಧ್ಯಮ ಪ್ರತಿನಿಧಿಗಳೊಂದಿಗೂ ಕಾರ್ಯಾಗಾರಗಳನ್ನು ನಡೆಸಲಾಯಿತು.

ನಂತರ ಎಲ್ಲಾ ಆರು ತಾಲೂಕುಗಳಿಂದ ಬಂದ ಶಿಫಾರಸುಗಳನ್ನು ಕ್ರೋಡೀಕರಿಸಿ ಜಿಲ್ಲಾ ಮಟ್ಟದ ಪಂಚಾಯತ್ ಸಮಾವೇಶದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಂದೆ ಮಂಡಿಸಲಾಯಿತು. ಆ ಸಮಾವೇಶದಲ್ಲಿ ೧೩ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಅರಣ್ಯೀಕರಣವನ್ನು ಹೆಚ್ಚಿಸುವುದು, ಜಲಮೂಲಗಳನ್ನು ರಕ್ಷಿಸುವುದು, ಮಣ್ಣಿನ ಆರೋಗ್ಯವನ್ನು ಪುನರ್ ಸ್ಥಾಪಿಸಲು ಸಾವಯವ ಕೃಷಿಗೆ ಉತ್ತೇಜನ ನೀಡುವುದು, ಜೀವವೈವಿಧ್ಯವನ್ನು ರಕ್ಷಿಸುವುದು, ಸ್ಥಳೀಯ ವೈವಿಧ್ಯಗಳನ್ನು ಕಾಪಾಡುವುದು ಹಾಗೂ ಕೃಷಿ ಆಧರಿತ ಜೀವನೋಪಾಯವನ್ನು ಸಶಕ್ತಗೊಳಿಸುವ ಬಗ್ಗೆ ಆ ನಿರ್ಣಯಗಳಿದ್ದವು.

ಇಂದು ಅಸರ್ ಮತ್ತು ಗ್ರಾಮವಿಕಾಸ್‌ನ ಮಾರ್ಗದರ್ಶನದಲ್ಲಿ ಕೋಲಾರ ಜಿಲ್ಲೆಯಾದ್ಯಂತ ೧೫೪ ಗ್ರಾಮ ಪಂಚಾಯತ್‌ಗಳು ೨೦೨೬-೨೭ನೇ ಸಾಲಿನ ಅಭಿವೃದ್ಧಿ ಯೋಜನೆಗಳಲ್ಲಿ ಜಿಲ್ಲೆಯ ಹವಾಮಾನ ಪ್ರತಿಕ್ರಿಯಾತ್ಮಕ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತದ ಮೇಲೆ ಸಮನ್ವಯದಿಂದ ಒತ್ತಡ ಹೇರಲು ಆರಂಭಿಸಿವೆ.

Read the English version of the blog here.

Receive Insights That Matter

Be the first to hear about new initiatives, community voices, and grounded climate solutions.